How to Build a Great Society?

ಒಂದು ಒಳ್ಳೆಯ ಸಮಾಜ ಮನೆಯಿಂದಲೇ ನಿರ್ಮಾಣ

– Anupama G.C.

ಹೌದು. ಸಮಾಜ ಅಂದ್ರೇನು, ಅದರಲ್ಲೂ ಒಳ್ಳೆಯ ಸಮಾಜ ಕೆಟ್ಟ ಸಮಾಜ ಅಂತಿರತ್ತಾ? ಅದು ಹೇಗೆ ಸಾಧ್ಯ?

ಸಮಾಜ ಅಂದ್ರೆ ನಾವೇ… ಅದರ ನಿರ್ಮಾಣ ನಮ್ಮಿಂದಲೇ ಅಲ್ವಾ! ಒಳ್ಳೆಯ ಸಮಾಜ ಅನ್ನೋದಕ್ಕಿಂತ ಉತ್ತಮ ಸಮಾಜ ಅನ್ನೋ ಪದ ಇಲ್ಲಿ ಸೂಕ್ತ ಅನ್ಸತ್ತೇ.
ಉತ್ತಮ ಸಮಾಜದ ನಿರ್ಮಾಣ ಹೇಗೆ ಸಾಧ್ಯ? ಅದು ಯಾರಿಂದ?
ನಮ್ಮಿಂದಲೇ ಅಲ್ವೇ..

ಖಂಡಿತಾ ಅದು ನಮ್ಮಿಂದಲೇ ಆಗ್ಬೇಕಾಗಿರೋದು.

ಹಾಗಿದ್ರೆ ಇತ್ತೀಚೆಗೆ ಹೆಚ್ಚಾಗಿರೊ ಸಮಾಜದಲ್ಲಿನ ಒಡಕು, ಒಳಜಗಳ, ಅಸಮಾನತೆ, ಅಸಿಹುಷ್ಣತೆ ಇದಕ್ಕೆಲ್ಲ ಯಾರು ಕಾರಣ… ಅದ್ಕೂ ಗೊತ್ತಿದ್ದೋ ಗೊತ್ತಿಲ್ಲದೆಯೋ ನಾವೇ ಕಾರಣ ಆಗ್ತೀವಿ. ಹಾಗಾಗಿ ಉತ್ತಮ ಸಮಾಜವನ್ನು ಬಯಸುವ ನಾವು ಆ ಉತ್ತಮ ಸಮಾಜದ ನಿರ್ಮಾಣಕ್ಕೆ ಕೊಡುವ ಕೊಡುಗೆ ಏನು ಎಂದೂ ಯೋಚಿಸಬೇಕಾಗುತ್ತದೆ…. ಮನೆಯೇ ಮೊದಲ ಪಾಠಶಾಲೆ ಅನ್ನುವ ನಾಣ್ಣುಡಿಯಿದೆ… ಹೌದು ಒಂದು ಮಗು ತನ್ನ ಐದು ವರ್ಷವನ್ನು ಮನೆಯೊಳಗೆ ನಮ್ಮೊಡನೆ ಕಳೆಯುವಾಗ ನಾವು ಆ ಮಗುವಿಗೆ ಕೊಡುವ ಉತ್ತಮ ನಡೆ ಹಾಗೂ ಸಂಸ್ಕಾರವೇ ಮುಂದೆ ಆ ಮಗು ಬೆಳೆದು ದೊಡ್ಡವನಾಗುವಾಗ ಆತನಲ್ಲಿ ಪ್ರತಿಬಿಂಬಿತವಾಗುತ್ತದೆ. ಕೆಲವರು ತಪ್ಪುವುದೇ ಇಲ್ಲಿ. ಅತೀಯಾದ ಮುದ್ದು, ಮಕ್ಕಳಲ್ಲಿ ಹಠಮಾರಿತನಕ್ಕೆ ದಾರಿಯಾಗುತ್ತೆ.

ಹಾಗೆಯೇ ವಯಸ್ಸಿಗೆ ತಕ್ಕನಾಗಿ ಅದಕ್ಕೆ ದೊರಕುವ ಸೌಲಭ್ಯ ದೊರಕಬೇಕು…. ನಮ್ಮ ಹತ್ತಿರ ಆಸ್ತಿ ಅಂತಸ್ತು ಇದೆ ಅಂತ ನಮ್ಮ ಸ್ಟೇಟಸ್ ಪ್ರಪಂಚಕ್ಕೆ ತೋರಿಸಿಕೊಡುವ ಭರದಲ್ಲಿ ಗೊತ್ತಿದ್ದೋ ಗೊತ್ತಿಲ್ಲದೆಯೋ ನಮ್ಮ ಮಕ್ಕಳಿಗೆ ಅದನ್ನ ಸಂಭಾಳಿಸುವ ಶಕ್ತಿ ಬರುವ ಮೊದಲೆ ಅದನ್ನ ಕೈಗೆ ಕೊಟ್ಟು, ಅದರ ಬೆಲೆ ಹಾಗೂ ಸದ್ಬಳಕೆ ತಿಳಿಯದ ಹಾಗೆ ಮಾಡುವುದೂ ಸಮಾಜಕ್ಕೆ ಮಾರಕ. ಅಂತಹ ವ್ಯಕ್ತಿ ದೊಡ್ಡಸ್ತಿಕೆಯ ಅಹಂಕಾರದಲ್ಲಿ ಮೆರೆಯಲು ಶುರುಮಾಡ್ತಾನೆ.. ಸಮಾಜಕ್ಕೆ ಒಬ್ಬ ಒಳ್ಳೆಯ ವ್ಯಕ್ತಿಯನ್ನು ಕೊಡುವುದು ನಮ್ಮ ಕೈಯಲ್ಲೇ ಇರತ್ತೆ…

ಇತ್ತೀಚೆಗೆ ಹೆಚ್ಚುತ್ತಿರುವ ಹಿಂಸಾಚಾರಕ್ಕೆ ನಾವೇ ಕಾರಣವಲ್ಲವೇ… ಇತ್ತೀಚೆಗೆ ನಡೆದ ಒಂದು ಘಟನೆಯನ್ನೇ ತಗೋಳ್ಳಿ. ಒಬ್ಬ ಶ್ರೀಮಂತನ ಪುತ್ರ ಪಾಪದ ನಾಯಿಯ ಮೇಲೆ ತನ್ನ ದುಬಾರಿ ಕಾರನ್ನು ಹತ್ತಿಸಿ, ಎಷ್ಟು ಕೆಳಮಟ್ಟಕ್ಕೆ ಇಳಿದ. ಆತನಲ್ಲಿದ್ದ ಶ್ರೀಮಂತಿಕೆಯ ಅಹಂಕಾರವೇ ಕಾರಣವಾಗಿದ್ದಲ್ಲವೇ? ಅದೇ ನೋಡಿ ಭಿಕ್ಷುಕನೊಬ್ಬ ತನ್ನ ಪಕ್ಕದಲ್ಲಿ ಒಂದು ಬೀದಿನಾಯಿ ಇದ್ರೂ ಅದಕ್ಕೆ ತಾನು ತಿನ್ನುವ ಊಟದಲ್ಲಿ ಅರ್ಧ ಹಾಕಿಯೇ ತಿನ್ನುವುದು… ಆ ಭಿಕ್ಷುಕನಲ್ಲಿರೋ ಮನುಷ್ಯತ್ವ ಈ ಶ್ರೀಮಂತನಲ್ಲಿ ಇಲ್ಲದಿರೋಕೆ ಕಾರಣ ಯಾರು.. ಒಬ್ಬ ಉತ್ತಮ ಪ್ರಜೆಯನ್ನು ಕೊಡುವಲ್ಲಿ ಅವನ ಹೆತ್ತವರು ಕಾರಣವಲ್ಲವಾ..

ಹೌದು.. ಒಪ್ಪಿದೆ, ಯಾವ ತಂದೆ ತಾಯಿಯೂ ತಮ್ಮ ಕರುಳಿನ ಕುಡಿ ಕೆಟ್ಟವನಾಗಲಿ, ಕೆಟ್ಟ ದಾರಿ ಹಿಡಿಯಲಿ ಅಂತ ಬಯಸೋಲ್ಲ …ಆದರೆ ಅತೀ ಮುದ್ದು ಹಾಗೂ ಶ್ರೀಮಂತಿಕೆಯ ಅಹಂ ಕಾರಣವಾಗಿತ್ತು…. ಇತ್ತೀಚೆಗೆ ಅಪ್ಪ ಅಮ್ಮ ಇಬ್ಬರೂ ಹೊರಗೆ ದುಡಿಯಲು ಹೋಗುವವರಾಗಿ ಮಕ್ಕಳ ಹಾಗೂ ಮನೆ ಕಡೆ ಗಮನ ಕೊಡುವುದು ಕಡಿಮೆಯಾಗುತ್ತಿದೆ… ಹಾಗಂತ ನಮ್ಮ ಜವಾಬ್ದಾರಿಯನ್ನು ನಾವು ಮರೆತರೆ ಹೇಗೆ… ನಮ್ಮ ಮಕ್ಕಳು ಯಾವ ದಾರಿಯಲ್ಲಿ ನಡೆಯುತ್ತಿದ್ದಾರೆ ಅನ್ನುವ ಅರಿವು ಹೆತ್ತವರಿಗಿರಲೇಬೇಕು. ಉತ್ತಮ ವ್ಯಕ್ತಿಯಿಂದಲೇ ಉತ್ತಮ ಸಮಾಜ ನಿರ್ಮಾಣ … ಆ ಉತ್ತಮ ವ್ಯಕ್ತಿಯನ್ನು ತಯಾರು ಮಾಡೋ ಜವಾಬ್ದಾರಿ ಪ್ರತಿಯೊಬ್ಬ ನಾಗರಿಕನಲ್ಲೂ ಇರಬೇಕು… ನಾವೇ ಎಡವಿ ಆಮೇಲೆ ಕೆಟ್ಟ ಸಮಾಜ ಅಂತ ಸಮಾಜವನ್ನು ದೂರಿದರೇನು ಬಂತು ಅಲ್ಲವಾ… ಹಾಗಾಗಿ ನಮ್ಮ ನಮ್ಮ ಮನೆಯಿಂದಲೇ ಸಮಾಜಕ್ಕೆ ಒಳ್ಳೆಯ ನಾಗರಿಕನನ್ನು ನೀಡುವ ಜವಾಬ್ದಾರಿ ನಮ್ಮೆಲ್ಲರ ಮೇಲಿದೆ.