ನನಗೂ ನೋವಾಗುತ್ತದೆ… ಪ್ಲೀಸ್! ಮೊಳೆಗಳಿಂದ ಮುಕ್ತಗೊಳಿಸಿ

-ವಿನೋದ್ ಕರ್ತವ್ಯ
ಬೆಂಗಳೂರು ಹುಡುಗ

ನಾಯಿ ಬಾಲ ಯಾವತ್ತಿದ್ದರೂ ಡೊಂಕು ಅಲ್ಲವೇ! ಅದೇ ರೀತಿ ಮನುಷ್ಯ ಕೂಡ. ಪ್ರಕೃತಿ ಎಷ್ಟೇ ಬಾರಿ ಎಚ್ಚರಿಸಿದರೂ ಸಹ ಬುದ್ಧಿ ಕಲಿಯುವುದಿಲ್ಲ. ಭೂಕಂಪನ, ಸುನಾಮಿ, ರಕ್ಕಸ ಮಳೆ ಸೇರಿದಂತೆ ಅನೇಕ ಉದಾಹರಣೆಗಳಿವೆ. ಮನುಷ್ಯ ಪ್ರಕೃತಿಯ ಮೇಲೆ ಮಾಡುತ್ತಿರುವ ಮಾರಣಹೋಮವೇ ಇದಕ್ಕೆಲ್ಲ ಮುಖ್ಯ ಕಾರಣ ಎಂದು ಹೇಳಬಹುದು.

ಇದಕ್ಕೆ ತಾಜಾ ಉದಾಹರಣೆ ಹೇಳಬೇಕೆಂದರೆ, ಮನುಷ್ಯನು ಹಿಪೊಕ್ರೈಟ್ (hypocrite) ಎನ್ನಬಹುದು. ಏಕೆ ಗೊತ್ತೆ? ಮರಗಳಿಗೆ ಜೀವ ಇದೆ ಎಂದು ಹೇಳಿದವರು ಯಾರು? ಎಂದಾದರು ಮರ ಅಥವಾ ಗಿಡಗಳು ಹೇಳಿತ್ತೇ? ಇಲ್ಲ ಅಲ್ಲವೆ? ಅದನ್ನು ಹೇಳಿದ್ದು ಮನುಷ್ಯನೇ ಮತ್ತು ಅದೇ ಮನುಷ್ಯ ಮರಗಳನ್ನು ತನ್ನ ಸ್ವಾರ್ಥಕ್ಕೆ ಕೊಲ್ಲುತ್ತಾನೆ.

ಹೌದು ಗೆಳೆಯರೇ, ನಮ್ಮ ಬೆಂಗಳೂರು ʼಗಾರ್ಡನ್ ಸಿಟಿʼ ಎಂದೇ ಖ್ಯಾತಿ. ಅದಕ್ಕೆ ನಮ್ಮ ನಗರದಲ್ಲಿ ಇರುವ ಬಗೆ ಬಗೆಯ ಮರಗಳು ಸಾಕ್ಷಿಯಾಗಿವೆ. ಆದರೆ, ಇತ್ತೀಚಿನ ಬೆಳವಣಿಗೆ ಗಮನಿಸಿದರೆ, ಪ್ರತಿ ಒಂದು ಮರಗಳ ಮೇಲೆ ಭಿತ್ತಿ ಪತ್ರ ಅಂಟಿಸುವ ಸಲುವಾಗಿ ಮರಗಳಿಗೆ ಮೊಳೆಗಳನ್ನು ಹೊಡೆದು ಹಾನಿ ಮಾಡಲಾಗುತ್ತಿದೆ.

ನಾವು ಎಷ್ಟೇ ಹಿಂಸೆ ಕೊಟ್ಟರೂ, ಮರಗಳು ನಮ್ಮ ಜೀವಕ್ಕೆ ಬೇಕಾದ ಉಸಿರನ್ನು ಕೊಡುತ್ತಲಿವೆ.

ನಾವು ಕೊಡುವ ಹಿಂಸೆ ಅಷ್ಟಿಷ್ಟಲ್ಲ! ಭಿತ್ತಿ ಪತ್ರ, ಟ್ಯೂಶನ್ ಇಲ್ಲಿದೆ, ಜ್ಯೋತಿಷ್ಯ ಕೇಂದ್ರ, ಪಂಕ್ಚರ್ ಅಂಗಡಿ, ಸ್ಕೂಲ್ ಇಲ್ಲಿದೆ, ಅಬ್ಬಬ್ಬಾ! ಹೀಗೆ ಪಟ್ಟಿ ಬೆಳೆಯುತ್ತದೆ. ಮರಗಳನ್ನು ಒಂದು ಕ್ಷಣ ಕೂಡ ಒಂದು ಜೀವಿಯಂತೆ ಕಾಣುತ್ತಿಲ್ಲ. ಛೇ! ಮನುಷ್ಯನನ್ನು ಮನುಷ್ಯ ಎಂದು ಹೇಗೆ ಕರೆಯುವುದು!

ಹಾಗಂತ ಪ್ರತಿ ಒಬ್ಬರೂ ಹಾಗಿರುವುದಿಲ್ಲ. ಅನೇಕ ತಂಡಗಳು ನಮ್ಮ ಬೆಂಗಳೂರಿನ ಮರಗಳಿಗೆ ಹೊಡೆದಿರುವ ಮೊಳೆಗಳನ್ನು ತೆಗೆಯುವ ಕೆಲಸ ಮಾಡುತ್ತಿದ್ದಾರೆ. ಹೌದು, ಮೊಳೆ ಮುಕ್ತ ಮರ ಎಂಬ ಅಭಿಯಾನ ಕೈಗೊಂಡಿದ್ದಾರೆ.

ಹಾಗಿದ್ದರೆ ಇದಕ್ಕೆ ಸರ್ಕಾರದಿಂದ ಯಾವುದೇ ಕಾನೂನು ಇಲ್ಲವೇ?

ಸರ್ಕಾರದಿಂದ ʼKarnataka Open Places Disfigurement Actʼ ಹಾಗೂ ʼTree Protection actʼ ಎಂಬ ಕಾಯಿದೆಗಳಿವೆ. ಈ ಕಾಯಿದೆಗಳ ಪ್ರಕಾರ ಮರಗಳಿಗೆ ಏನಾದರು ಅಂಟಿಸುವುದು ಅಥವಾ ಹಾನಿ ಮಾಡುವುದು ಕಾನೂನು ಬಾಹಿರ.

ಹಾಗಿದ್ದರೆ ಸಾರ್ವಜನಿಕರಾಗಿ ನಾವು ಏನು ಮಾಡಬಹುದು?

ಇನ್ನು ಮುಂದೆ ನೀವು ಹೊರಗೆ ಓಡಾಡುವಾಗ ಮರಗಳಿಗೆ ಏನಾದರು ಹಾನಿ ಮಾಡಿದ್ದರೆ ಅಥವಾ ಭಿತ್ತಿ ಪತ್ರ ಅಂಟಿಸಿದ್ದನ್ನು ಕಂಡರೆ ಅದನ್ನು ತೆಗೆಯಿರಿ.

ಈ ಪುಟ್ಟ ಸೇವೆ ಮಾಡೋಣ ಬನ್ನಿ.