Importance of Drinking Water

ನೀರು ಕುಡಿಯುವ ಮುನ್ನ !

-Adarsh P. S.
Ayurveda Student

ಯಾರೇ ಆದರೂ ಆರೋಗ್ಯ ಸಲಹೆ ನೀಡುವಾಗ ಮೊದಲು ಹೇಳುವ ಮಾತು –

“ಚೆನ್ನಾಗಿ ನೀರು ಕುಡಿಯಬೇಕು” ಎಂದು. ಇನ್ನೂ ಕೆಲವರು ಹೇಳುವುದು ಕೇಳಿರುತ್ತೀರಾ..ದಿನಕ್ಕೆ ಅಷ್ಟು ಲೀ ನೀರು ಕುಡಿಯಬೇಕು , ಇಷ್ಟು ಕುಡಿಯುಬೇಕು ಎಂದು. ಹಾಗಾದರೆ ನಾವು ಪ್ರತಿನಿತ್ಯ ಎಷ್ಟು ನೀರು ಕುಡಿಯಬೇಕು,ನೀರು ಸೇವಿಸುವ ಕ್ರಮದ ಬಗ್ಗೆ ಆಯುರ್ವೇದ ಏನು ಹೇಳುತ್ತದೆ ಎಂಬುದನ್ನು ತಿಳಿದುಕೊಳ್ಳೋಣ.

ಒಬ್ಬ ವ್ಯಕ್ತಿಯು ದಿನಕ್ಕೆ ಇಷ್ಟೇ ಪ್ರಮಾಣದಲ್ಲಿ ನೀರು ಕುಡಿಯಬೇಕು ಎಂದು ಹೇಳಲು ಸಾಧ್ಯವಿಲ್ಲ.ಅದು ಅವರವರ ಅಗತ್ಯತೆಗೆ ಅನುಗುಣವಾಗಿ ಇರುವಂತದ್ದು.ಯಾರೇ ಆಗಲಿ ಬಾಯರಿಕೆ ಇದ್ದರೆ ಮಾತ್ರ ನೀರು ಕುಡಿಯಬೇಕು.ಅನಗತ್ಯವಾಗಿ ನೀರು ಕುಡಿಯಬಾರದು ಎಂದು ಆಯುರ್ವೇದ ತಿಳಿಸುತ್ತದೆ.
ಅಗತ್ಯಕ್ಕಿಂತ ಅಧಿಕ ನೀರು ಸೇವಿಸಿದಾಗ ಅದು ಜಠರ ಅಗ್ನಿಯನ್ನು ಕಡಿಮೆ ಮಾಡುತ್ತದೆ.ಅಗ್ನಿಮಾಂದ್ಯದಿಂದ ಅನೇಕ ರೋಗಗಳು ಉತ್ಪತ್ತಿಯಾಗುತ್ತದೆ.

ಆಯುರ್ವೇದ ಪ್ರಕಾರ ನೀರು ಕುಡಿಯಬೇಕಾದ ವಿಧಾನ

  • ಬೆಳಗ್ಗೆ ಎದ್ದು ಹಲ್ಲು ಉಜ್ಜಿದ ನಂತರ ನೀರನ್ನು ಕುಡಿಯಬೇಕು.
  • ಯಾವಾಗಲೂ ನಿಧಾನವಾಗಿ , ಕುಳಿತುಕೊಂಡೇ ನೀರನ್ನು ಕುಡಿಯಬೇಕು.
  • ಅಜೀರ್ಣ ಇದ್ದಾಗ ಕಡಿಮೆ ಪ್ರಮಾಣದಲ್ಲಿ ನೀರನ್ನು ಕುಡಿಯಬೇಕು.
  • ಊಟದ ಮೊದಲು ನೀರನ್ನು ಕುಡಿಯುವುದರಿಂದ ದೇಹದ ತೂಕ ಇಳಿಸಬಹುದು.
  • ಊಟದ ಮಧ್ಯೆ ನೀರನ್ನು ಕುಡಿಯುವುದರಿಂದ ಆಹಾರವು ಸುಲಭವಾಗಿ ಜೀರ್ಣವಾಗುತ್ತದೆ.
  • ಊಟದ ನಂತರ ನೀರನ್ನು ಕುಡಿಯುವುದರಿಂದ ದೇಹದ ತೂಕ ಹೆಚ್ಚುತ್ತದೆ.

ಶುದ್ಧ ನೀರಿನ ಗುಣಗಳು :

  • ಜೀವನೀಯ ಗುಣ
  • ಪೋಷಕ
  • ಹೃದಯಕ್ಕೆ ಉತ್ತಮ
  • ಆಹ್ಲಾದಕರ
  • ಬುದ್ಧಿಕಾರಕ
  • ಶೀತ ಗುಣ
  • ಲಘು ಗುಣ
    ಶುದ್ಧ ನೀರಿಗೆ ಯಾವುದೇ ರಸ (ರುಚಿ) ಇರುವುದಿಲ್ಲ.

ಯಾವ ನೀರು ಉತ್ತಮ?

ಆಯುರ್ವೇದದಲ್ಲಿ ಅಂತರೀಕ್ಷ ಜಲವನ್ನು ಶ್ರೇಷ್ಠ ಹಾಗೆಯೇ ವರ್ಷ ಋತುವಿನ ನದಿ ನೀರನ್ನು ಅಶ್ರೇಷ್ಠ ಎಂದು ಹೇಳಿದ್ದಾರೆ.

ಬಿಸಿ ನೀರು VS ತಣ್ಣೀರು

ಬಿಸಿ ನೀರಿನ ಉಪಯೋಗಗಳು:

  • ದೇಹದಲ್ಲಿ ಶೇಖರಣೆಯಾದ ಅಧಿಕ ಕೊಬ್ಬು ಕರಗುತ್ತದೆ.
  • ಶೀತ,ನೆಗಡಿ,ಜ್ವರ, ಕೆಮ್ಮು,ಕಫ ಕಡಿಮೆಯಾಗುತ್ತದೆ.
  • ನೋವು ಉಪಶಮನವಾಗುತ್ತದೆ.
  • ಅಜೀರ್ಣ ನಿವಾರಣೆಯಾಗುತ್ತದೆ.
  • ಶರೀರದಲ್ಲಿರುವ ವಾತ, ಕಫವನ್ನು ಸಮತೋಲನದಲ್ಲಿರಿಸುತ್ತದೆ.
  • ಇಡೀ ಶರೀರ ಪರಿಶುದ್ಧಗೊಳ್ಳುತ್ತದೆ.
  • ಜೀರ್ಣಕ್ರಿಯೆಯನ್ನು ಹೆಚ್ಚಿಸುತ್ತದೆ.
  • ಮೂತ್ರಕೋಶವನ್ನು ಶುಚಿಗೊಳಿಸುತ್ತದೆ.
  • ಮಳೆಗಾಲ,ಚಳಿಗಾಲ ಹಾಗೂ ವಿಶೇಷವಾಗಿ ಶೀತ ಪ್ರಕೃತಿ ಉಳ್ಳವರು ಉಷ್ಣ ಜಲವನ್ನು ಸೇವಿಸಿದರೆ ಉತ್ತಮ

ಈ ಕೆಳಗಿನ ಸಂದರ್ಭಗಳಲ್ಲಿ ಬಿಸಿ ನೀರು ಕುಡಿಯಬಾರದು:

  • ರಕ್ತಸ್ರಾವದ ರೋಗಗಳಲ್ಲಿ.
  • ದೇಹದಲ್ಲಿ ಉರಿಯುವಿಕೆ ಇದ್ದಾಗ.
  • ಭೇದಿಯಾದಾಗ.
  • ತಲೆಸುತ್ತು/ಮೂರ್ಛೆ ಹೋದಾಗ.

ತಣ್ಣೀರು ಈ ಕೆಳಗಿನ ಸಂದರ್ಭಗಳಲ್ಲಿ ಸಹಕಾರಿ:

  • ಮದ್ಯದ ಅಮಲೇರಿದವರಲ್ಲಿ
  • ವಿಷ ಸೇವಿಸಿದ್ದಾಗ
  • ಉರಿಯೂತ
  • ರಕ್ತಸ್ರಾವದ ರೋಗಗಳಲ್ಲಿ
  • ಮೂರ್ಛೆ ಹೋದಾಗ
  • ಸುಸ್ತಾದಾಗ
  • ತಲೆಸುತ್ತು
  • ವಾಂತಿ
  • ಬಾಯಾರಿಕೆ
  • ಬೇಸಿಗೆಯಲ್ಲಿ ಹಾಗೂ ವಿಶೇಷವಾಗಿ ಉಷ್ಣ ಪ್ರಕೃತಿ ಉಳ್ಳವರು ಶೀತ ಜಲವನ್ನು ಸೇವಿಸಿದರೆ ಉತ್ತಮ.
  • ವಾತ ರೋಗ,ಪಾರ್ಶ್ವ ಶೂಲ ,ನವಜ್ವರದಲ್ಲಿ ತಣ್ಣೀರನ್ನು ಬಳಕೆ ಮಾಡಬಾರದು.

ಗಮನಿಸಿ : ಇಲ್ಲಿ ಶೀತ ಜಲ ಎಂದರೆ ಬಿಸಿ ಮಾಡದೆ ಇರುವ ಸಾದಾ ನೀರು.ಐಸ್ ನೀರು/ಫ್ರಿಡ್ಜ್ ನಲ್ಲಿಟ್ಟ ನೀರಲ್ಲ.

ನೀರನ್ನು ಎಷ್ಟು ಬಿಸಿ ಮಾಡಬೇಕು?

ಒಂದು ಸ್ವಚ್ಚ ಸ್ಟೀಲ್ ಪಾತ್ರೆಯಲ್ಲಿ ನೀರನ್ನು ತೆಗೆದುಕೊಂಡು ಅದನ್ನು ಮಂದ ಅಗ್ನಿಯಲ್ಲಿ ಕುದಿಸಬೇಕು.ನೀರನ್ನು ಚೆನ್ನಾಗಿ ಕುದಿಸಿ,1/8,1/4,1/2 ಅಥವಾ 1/3 ಭಾಗಕ್ಕೆ ಬತ್ತಿಸಬೇಕು.ಇದನ್ನು ಆಯುರ್ವೇದದಲ್ಲಿ ಉಷ್ಣ ಜಲ ಎಂದು ಪರಿಗಣಿಸಲಾಗುತ್ತದೆ.

ವಿ.ಸೂ : ಕಾಯಿಸಿ ತಣಿಸಿದ ನೀರನ್ನು ಒಂದಕ್ಕಿಂತ ಹೆಚ್ಚು ದಿನ ಬಳಸಬಾರದು.

ಈ ಕೆಳಗಿನ ಸಮಸ್ಯೆಗಳಿದ್ದಲ್ಲಿ ಅತಿಯಾಗಿ ನೀರು ಕುಡಿಯಬಾರದು :

  • ಅಗ್ನಿಮಾಂದ್ಯ
  • ಉದರ ರೋಗ
  • ಅತಿಸಾರ
  • ಮೂಲವ್ಯಾಧಿ
  • ಗ್ರಹಣಿ ರೋಗ
  • ಗುಲ್ಮ,ಪಾಂಡು ರೋಗಗಳಲ್ಲಿ
  • ಊತ, ಸೊರಗುವಿಕೆ ಇದ್ದಾಗ

ನೀರಿನ ಸಂಗ್ರಹ ವಿಧಿ

ಚಿನ್ನ,ಮಿಶ್ರ ಲೋಹ, ತಾಮ್ರ,ಹಿತ್ತಾಳೆ, ಕಬ್ಬಿಣ,ಮಣ್ಣಿನ ಪಾತ್ರೆಗಳಲ್ಲಿ ಸಂಗ್ರಹಿಸಿದ ನೀರಿಗೆ ತನ್ನದೇ ಆದ ಔಷಧೀಯ ಗುಣ ಇರುತ್ತದೆ.

ವಿವಿಧ ಪಾತ್ರೆಗಳಲ್ಲಿ ಸಂಗ್ರಹಿಸಿದ ನೀರಿನ ಗುಣಗಳು

ಚಿನ್ನದ ಪಾತ್ರೆ :

  • ಸಿಹಿಯಾಗಿರುತ್ತದೆ
  • ವಾತ ಪಿತ್ತ ಕಫ ದೋಷಗಳನ್ನು ಸಮತೋಲನದಲ್ಲಿರಿಸುತ್ತದೆ
  • ರೋಗನಿರೋಧಕ ಶಕ್ತಿಯನ್ನು ಹೆಚ್ಚಿಸುತ್ತದೆ
  • ವಾಜೀಕರಣ ಶಕ್ತಿಯನ್ನು ಹೊಂದಿದೆ
  • ದೇಹ ಬಲವನ್ನು ವರ್ಧಿಸುತ್ತದೆ
  • ಬುದ್ಧಿಯನ್ನು ಹೆಚ್ಚಿಸುತ್ತದೆ
  • ಮಂಗಳಕರ

ಮಿಶ್ರ ಲೋಹ :

  • ದೇಹವನ್ನು ತಂಪು ಮಾಡುತ್ತದೆ
  • ಕಫ ದೋಷವನ್ನು ಹೆಚ್ಚಿಸುತ್ತದೆ
  • ಮಲ ಮೂತ್ರವನ್ನು ಹೆಚ್ಚಿಸುತ್ತದೆ

ಹಿತ್ತಾಳೆ :

  • ಕಫ,ಪಿತ್ತವನ್ನು ಹೆಚ್ಚಿಸುತ್ತದೆ
  • ದೇಹಕ್ಕೆ ಬಲವನ್ನು ನೀಡುತ್ತದೆ

ಮಣ್ಣಿನ ಪಾತ್ರೆ :

  • ದೇಹವನ್ನು ತಂಪು ಮಾಡುತ್ತದೆ
  • ಶರೀರದಲ್ಲಿರುವ ಕಲ್ಮಶಗಳನ್ನು ಹೊರಹಾಕುತ್ತದೆ
  • ದೋಷ ಮತ್ತು ಧಾತುಗಳನ್ನು ಸಮತೋಲನದಲ್ಲಿ ಇರಿಸುತ್ತದೆ
  • ದೇಹಬಲವನ್ನು ಹೆಚ್ಚಿಸುತ್ತದೆ
  • ರೋಗನಿರೋಧಕ ಶಕ್ತಿಯನ್ನು ನೀಡುತ್ತದೆ.

ತಾಮ್ರ :

  • ಉಷ್ಣ ಗುಣ ಹೊಂದಿರುತ್ತದೆ
  • ಪಿತ್ತ ಹಾಗೂ ವಾತ ದೋಷವನ್ನು ವರ್ಧಿಸುತ್ತದೆ
  • ಮಿದುಳು,ಚರ್ಮದ ಆರೋಗ್ಯಕ್ಕೆ ಉತ್ತಮ
  • ಕ್ರಿಮಿನಾಶಕ ಗುಣ ಹೊಂದಿದೆ
  • ರೋಗನಿರೋಧಕ ಶಕ್ತಿಯನ್ನು ನೀಡುತ್ತದೆ
  • ಜೀರ್ಣಕ್ರಿಯೆಗೆ ಸಹಕಾರಿ

ಕಬ್ಬಿಣದ ಪಾತ್ರೆಯಲ್ಲಿ ಶೇಖರಿಸಿದ ನೀರು ಕುಡಿಯಲು ಅನರ್ಹ.ಈ ನೀರನ್ನು ಸೇವಿಸಿದರೆ ಅಗ್ನಿಮಾಂದ್ಯ,ತುರಿಕೆ ಇತ್ಯಾದಿಗಳು ಕಾಣಿಸಿಕೊಳ್ಳುತ್ತದೆ.
ಹಾಗೆಯೇ ಆದಷ್ಟು ಪ್ಲಾಸ್ಟಿಕ್ ಬಾಟಲಿ ನೀರಿನ ಬಳಕೆ ಮಾಡಬೇಡಿ. ಪ್ಲಾಸ್ಟಿಕ್ ಸಹ ಒಳ್ಳೆಯದಲ್ಲ.

ಸ್ವಾತಿ ನಕ್ಷತ್ರದ ಮಳೆ ನೀರು

ಸ್ವಾತಿ ನಕ್ಷತ್ರದ ಮಳೆಗೆ ಬಹಳ ಮಹತ್ವವಿದೆ.ಈ ಮಳೆ ನೀರು ನೆಲಕ್ಕೆ ಬೀಳುವ ಮೊದಲೇ ತಾಮ್ರ,ಮಣ್ಣು ಅಥವಾ ಸ್ಟೀಲ್ ಪಾತ್ರೆಯಲ್ಲಿ ನೇರವಾಗಿ ಸಂಗ್ರಹಿಸಬೇಕು.

ಸ್ವಾತಿ ನಕ್ಷತ್ರ ಮಳೆ ನೀರಿನ ಔಷಧೀಯ ಗುಣಗಳು :

  • ಸ್ವಾತಿ ನಕ್ಷತ್ರದ ಮಳೆ ನೀರು,ಸಣ್ಣಪುಟ್ಟ ನೋವುಗಳಿಗೆ,ಚರ್ಮದ ಸಮಸ್ಯೆಗಳಿಗೆ ಉಪಕಾರಿ
  • ಕಣ್ಣಿನ , ಕೂದಲಿನ ಆರೋಗ್ಯಕ್ಕೆ ಉತ್ತಮ

ಹೀಗೆ ನೀರು ಒಳ್ಳೆಯದಾದರೂ,ಸರಿಯಾಗಿ ಬಳಕೆ ಮಾಡಿದರಷ್ಟೇ ಅದರ ಪ್ರಯೋಜನಗಳು ನಮಗೆ ಲಭಿಸಲು ಸಾಧ್ಯ.ಇಲ್ಲವಾದಲ್ಲಿ ಅದು ಸಮಸ್ಯೆಗಳನ್ನು ಸಹ ಉಂಟು ಮಾಡಬಹುದು.ಆದ್ದರಿಂದ ಎಲ್ಲರೂ ನೀರಿನ ಗುಣಗಳನ್ನು,ಸೇವನಾ ವಿಧಿಯನ್ನು ಅರಿತುಕೊಂಡು ಅದನ್ನು ಪಾಲಿಸಬೇಕು.