Whose Responsibility Is Education?

-ಸುಧಾಕರ ಜೈನ್ ಹೊಸಬೆಟ್ಟು ಗುತ್ತು

ಶಿಕ್ಷಣ ಯಾರ ಹೊಣೆಗಾರಿಕೆ?

ಈ ಪ್ರಶ್ನೆಯೊಂದು ನನ್ನ ಕಿವಿಗೆ ಬಿದ್ದ ತಕ್ಷಣ ನನ್ನ ಸುತ್ತ ಒಂದು ಕಟಕಟೆ ನಿರ್ಮಾಣ ಆಗಿ ಹೋಯ್ತು.

ಪಾಠ ಮಾಡಿದ ಗುರುಗಳೆಲ್ಲಾ ಅಲ್ಲೇ ಸುತ್ತ ನಿಂತಂತ್ತಿತ್ತು. ಅವರ ಸುತ್ತಲೂ ಒಂದೊಂದು ಸುತ್ತಿನ ಕಟಕಟೆ ಕಂಡ ಹಾಗಾಯ್ತು. ಆ ಸುತ್ತಿನ ಸುತ್ತ ಇನ್ನೊಂದಷ್ಟು ಸುತ್ತುಗಳು ಕಂಡ ಹಾಗಾಯ್ತು. ಆ ಸುತ್ತಿನಲ್ಲಿ ಒಂದಷ್ಟು ಗೊತ್ತಿರುವ ಮುಖಗಳು. ಒಂದಷ್ಟು ಗೊತ್ತಾಗಬೇಕಾದ ಮುಖಗಳು. ಅವರೆಲ್ಲರ ಸುತ್ತಲೂ ಮತ್ತೆ ಒಂದೊಂದು ಕಟಕಟೆ ಕಾಣುತ್ತಿತ್ತು.

ಎಲ್ಲಾ ಬಾಲ್ಯದಿಂದ ನೋಡಿದ ಸಂಬಂಧಗಳು. ಹೆಚ್ಚು ಅಂಕ ಪಡೆಯುತ್ತಿದ್ದ ಪಕ್ಕದ ಮನೆಯ ಸಹಪಾಠಿಯನ್ನು ಹೊಗಳಿ ಹೊಗಳಿ ತನ್ನ ಮಗುವಿಗೆ ಅವಮಾನ ಮಾಡಿ ಕುಗ್ಗಿಸುತ್ತಿದ್ದ ತಂದೆ-ತಾಯಿ.
ಓದಲು ಬರದೆ ಇದ್ದಾಗ ತಪ್ಪು ತಪ್ಪಾಗಿ ಓದುವುದನ್ನೇ ಎಲ್ಲರಿಗೂ ಕೇಳುವಂತೆ ಓದಿಸಿ ತಾನೂ ನಗಾಡಿ, ತರಗತಿಯ ಇತರ ಮಕ್ಕಳೂ ನಗುವಂತೆ ಮಾಡುತ್ತಿದ್ದ ಲಘುವಾಗಿದ್ದ ಆ ಗುರುಗಳು.
ಶಾಲೆಯ ಪಕ್ಕದ ಗೂಡಂಗಡಿಯಲ್ಲಿ ಒಂದು ಚಕ್ಕುಲಿಯ ದುಡ್ಡು ಕೊಟ್ಟು, ಎರಡು ಚಕ್ಕುಲಿಯನ್ನು ಕದ್ದು ಸಿಕ್ಕಿಬಿದ್ದ ಮೇಲೆ ಪ್ರತಿದಿನ ಚಕ್ಕುಲಿ ಕಳ್ಳ ಎಂದು ಎಲ್ಲರಿಗೂ ಆಗ ಪರಿಚಯಿಸುತ್ತಿದ್ದ, ಈಗ ಸತ್ತಿರಬಹುದಾದ ಗೂಡಂಗಡಿಯೊಳಗಿನ ಮುದಿ ಮುನುಷ್ಯ.

ಟಿಕೇಟಿನ ದುಡ್ಡು ಉಳಿಸಿ ಐಸ್ ಕ್ಯಾಂಡಿ ತಿನ್ನುವಾಸೆಯಿಂದ ಟಿಕೇಟ್ ಮಾಡದೆ ತಪ್ಪಿಸಿಕೊಂಡಾಗ, ಸಿಕ್ಕಿಬಿದ್ದ ಕೂಡಲೇ ಎಲ್ಲರಿಗೂ ಕೇಳುವ ಹಾಗೆ ಬೈದು, ಎಲ್ಲರಿಗೂ ಕಾಣುವ ಹಾಗೆ ಹೊಡೆದು, ಅರ್ಧದಾರಿಯಲ್ಲಿ ಬಸ್ಸಿನಿಂದ ಇಳಿಸಿ ಹೋಗಿದ್ದ ಆ ಕಂಡೆಕ್ಟರ್. ಹೀಗೆ ಇನ್ನೂ ಸುಮಾರಷ್ಟು ಸಂಬಂಧಗಳು ಆ ಕಟಕಟೆಯೊಳಗೆ ನಿಂತಂತೆ ಕಂಡವು.

‘ತಾಯಿಯೇ ಮೊದಲ ಗುರು’ ಅಂತ ಒಂದು ಮಾತು. ಈ ವಾಕ್ಯವನ್ನು ಒಂದು ಗೆರೆಯಿಂದ ಇನ್ನೊಂದು ಗೆರೆಗೆ ವಿಸ್ತರಿಸಿದರೆ, ಮೊದಲ ಗುರುವನ್ನು ದಾಟಿ ಎರಡನೇ ಗುರುವೊಬ್ಬರು ಇದ್ದಾರೆ ಅಂತಾಯ್ತು. ಆ ಎರಡನೆಯ ಗುರು ಹೇಗಿರುತ್ತಾರೆ ಅನ್ನುವುದರ ಮೇಲೆ ಶಿಕ್ಷಣದ ದಾರಿಯ ಮೇಲಿನ ಕಲ್ಲು ಮುಳ್ಳುಗಳ ಲೆಕ್ಕ ಸಿಗುತ್ತಾ ಹೋಗುತ್ತದೆ.

ತಾಯಿ ಮೊದಲ ಗುರುವಾಗುತ್ತಾಳೆ ಸರಿ. ಆದರೆ ನಂತರದ ಗುರುವಾಗುವವರು ತಾಯಿಯಾಗುತ್ತಾರಾ? ಒಂದು ವೇಳೆ ತಾಯಿಯಾದರು ಅಂತಾದರೆ, ವಿದ್ಯಾರ್ಥಿ ತಾನು ಗುರುವಿನ ಮಡಿಲ ಮಗುವಾಗುತ್ತದೆ. ಗುರು ತಾಯಿಯಾಗದೆ ಹೋದರೆ ವಿದ್ಯಾರ್ಥಿ ಅಪರಾಧಿಯಾಗುತ್ತಾ ಹೋಗುವಂತಾಗುತ್ತದೆ. ಮಗುವೊಂದು ಅಪರಾಧ ಮಾಡುವವರೆಗೆ ಮರೆಯಲ್ಲಿ ಕಾದು ಅಪರಾಧ ಮಾಡಿದ ಮೇಲೆ ಅಪರಾಧಿಯನ್ನು ಸಾಕುವ ಬದಲು ಅಪರಾಧ ಮಾಡದಂತೆ ರಕ್ಷಿಸುವುದು ತಾಯಿಯ ಹೃದಯ.

ಗುರುವಾದವರು ತಾಯಿಯಾದರೆ ಸಾಕೆ? ತನ್ನ ಸುತ್ತ ಇರುವವರೆಲ್ಲರೂ ತಾಯಿಯಾಗುತ್ತಾ ಹೋಗಬೇಕಲ್ಲಾ. ಆಗ ತನ್ನ ಸುತ್ತಲಿನ ಮಕ್ಕಳೆಲ್ಲಾ ಮಕ್ಕಳಾಗುತ್ತಾರೆ. ಮುಂದೊಂದು ದಿನ ದೇಶದ ಸಂಪತ್ತಾಗುತ್ತಾರೆ.

ಶಿಕ್ಷಣ ಅನ್ನುವುದು ನಾಲ್ಕು ಗೊಡೆ, ಮೂರು ಕಿಟಕಿ, ಒಂದು ಬಾಗಿಲು ಇರುವ ಶಾಲೆಯೊಳಗೆ ಸಿಗುವಂತಹ ಬೋಧನೆ ಮಾತ್ರ ಅಲ್ಲವಲ್ಲಾ. ಮಗುವಿನ ಸುತ್ತ ಇರುವ ಪ್ರಪಂಚವೇ ಒಂದು ಗುರುಕುಲವಾದಾಗ ಆ ಮಗುವಿನ ಸುತ್ತ ಇರುವ ನಾವೆಲ್ಲರೂ ಒಂದಲ್ಲ ಒಂದು ರೀತಿಯ ಗುರುಗಳಾಗಬೇಕು. ಆ ಗುರುಗಳೆಲ್ಲರೂ ತಾಯಿಯಾಗಬೇಕು.

ಇಷ್ಟನ್ನು ಬರೆದು ಮುಗಿಸುವಾಗ ನನ್ನ ಹೆಗಲ ಮೇಲಿನ ಭಾರದ ತೂಕ ಇನ್ನೂ ಒಂದಷ್ಟು ಹೆಚ್ಚಾದಂತಿದೆ.

ಈಗ ಇಷ್ಟನ್ನು ಓದಿ ಮುಗಿಸುವಾಗ ನಿಮ್ಮ ಹೆಗಲ ಭಾರದ ತೂಕವನ್ನು ಅಳತೆ ಮಾಡುವ ತಕ್ಕಡಿ ಅಲ್ಲೆಲ್ಲೋ ನಿಮ್ಮ ಹೃದಯದ ಒಳಗಿನಿಂದ ಇಣುಕುತ್ತಿರುತ್ತದೆ ನೋಡಿ.

ಶಿಕ್ಷಣ ನಮ್ಮ ಹೊಣೆಯೂ ಹೌದು.