Freedom Fighter Mangal Pandey

-ಅಕ್ಷತಾ ಹೆಬ್ಬಾರ್

ಸ್ವಾತಂತ್ರ್ಯ ಹೋರಾಟದ ಮೊದಲ ಸಂಗ್ರಾಮವೆಂದ ಕೂಡಲೇ ಮೊದಲಿಗೆ ನೆನಪಾಗುವುದು ಅಪ್ರತಿಮ ದೇಶಭಕ್ತ (ಯೋಧ) ಮಂಗಲಪಾಂಡೆ. ಮಂಗಲಪಾಂಡೆ ಒಬ್ಬ ಭಾರತೀಯ ಸೈನಿಕ. 1857ರ ಭಾರತೀಯ ದಂಗೆಯ ಪ್ರಾರಂಭದ ಘಟನೆಗಳಲ್ಲಿ ಪ್ರಮುಖ ಪಾತ್ರ ವಹಿಸಿದ್ದರು.

ಇವರು 1857 ಎಪ್ರಿಲ್ 8 ರ ಭಾರತದ ಪ್ರಥಮ ಸ್ವಾತಂತ್ರ್ಯ ಸಂಗ್ರಾಮದ ಹುತಾತ್ಮ ಎಂದೇ ಪ್ರಖ್ಯಾತರು. ಈಸ್ಟ್ ಇಂಡಿಯಾ ಕಂಪನಿಯ ಬ್ರಿಟಿಷ್ ಸೈನ್ಯದಲ್ಲಿ ಸಿಪಾಯಿಯಾಗಿದ್ದವರು. ಭಾರತದಲ್ಲಿ, ಬ್ರಿಟಿಷ್ ಆಳ್ವಿಕೆಯ ವಿರುದ್ಧ ಹೋರಾಡುವ ಸ್ವಾತಂತ್ರ್ಯ ಹೋರಾಟಗಾರ ಎಂದು ಪಾಂಡೆಯವರನ್ನು ನೆನಪಿಸಿಕೊಳ್ಳಲಾಗುತ್ತದೆ.

ಮಂಗಲಪಾಂಡೆ ಒಂದು ಭೂಮಿಹಾರ್ ಬ್ರಾಹ್ಮಣ ಕುಟುಂಬಕ್ಕೆ ಸೇರಿದವರು. ಅವರು 22ನೇ ವಯಸ್ಸಿನಲ್ಲಿ 1849 ರಲ್ಲಿ ಈಸ್ಟ್ ಇಂಡಿಯಾ ಕಂಪನಿಯನ್ನು ಸೇರಿದ್ದರು. ಪಾಂಡೆ, 34ನೇ ಬಂಗಾಳ ಸ್ಥಳೀಯ ಪದಾತಿದಳದ 6ನೇ ಕಂಪನಿಯ ಭಾಗವಾಗಿದ್ದರು.

ಅವರ ಹೆಸರು ಇತಿಹಾಸದಲ್ಲಿ ಅಜರಾಮರವಾಗುವುದಕ್ಕೆ ಸಂದರ್ಭ ಸೃಷ್ಟಿಯಾಗಿದ್ದು, 1857 ಮಾರ್ಚ್‌ನಲ್ಲಿ. ಆ ಸಂದರ್ಭದಲ್ಲಿ ಬ್ರಿಟೀಷ್ ಸರ್ಕಾರ ಹೊಸದಾಗಿ ಪರಿಚಯಿಸಿದ್ದ ಎನ್ಫೀಲ್ಡ್ ಪಿ-53 ರೈಫಲ್‌ಗಳ ಬುಲೆಟ್ ಕಾರ್ಟ್ರಿಜ್‌ಗಳಿಗೆ ಹಸು ಮತ್ತು ಹಂದಿಯ ಮಾಂಸವನ್ನು ಸವರಲಾಗಿತ್ತು. ಅದನ್ನು ಉಪಯೋಗಿಸಲು ಕಾಟ್ರಿಜ್‌ನ ಹಿಂಭಾಗವನ್ನು ಕಚ್ಚಬೇಕಿತ್ತು.
ಈ ವಿಷಯ ತಿಳಿಯುತ್ತಿದ್ದಂತೆಯೇ ಸೇನೆಯಲ್ಲಿದ್ದ ಹಿಂದು ಮತ್ತು ಮುಸ್ಲಿಂ ಸೈನಿಕರು ಉದ್ರಿಕ್ತರಾಗಿದ್ದರು. ಏಕೆಂದರೆ ಹಸು ಹಿಂದುಗಳಿಗೆ ಪೂಜನೀಯ. ಹಂದಿ ಎಂದರೆ ಮುಸ್ಲಿಮರಿಗೆ ವರ್ಜ್ಯ. ಎರಡು ಮತಗಳ ಧಾರ್ಮಿಕ ಭಾವನೆಗೆ ನೋವುಂಟು ಮಾಡುವ ಇಂಥ ಕೆಲಸ ಸಾಧ್ಯವಿಲ್ಲ ಎಂದು ಸಿಪಾಯಿಗಳು ವಿರೋಧಿಸಿದ್ದರು.

ಬ್ರಿಟಿಷರ ಬಿಗುಮುಷ್ಟಿಯಿಂದ ಸ್ವಾತಂತ್ರ್ಯ ಪಡೆವ ಹುಮ್ಮಸ್ಸಿನಲ್ಲಿದ್ದ ಬಿಸಿ ರಕ್ತಕ್ಕೆ ನೆಪವೊಂದು ಬೇಕಿತ್ತು. 1857, ಮಾರ್ಚ್ 29ರಂದು ಬ್ರಿಟಿಷ್ ಅಧಿಕಾರಿ ಮೇಜರ್ ಹ್ಯೂಸನ್ ಮತ್ತು ಲೆಫ್ಟಿನಂಟ್ ಭಾಘ್ ಮೇಲೆ ಮಂಗಲ್‌ ಪಾಂಡೆ ಗುಂಡಿನ ದಾಳಿ ನಡೆಸಿ ಅವರಿಬ್ಬರನ್ನೂ ನೆಲಕ್ಕುರುಳಿಸಿದ್ದರು. ನಂತರ ಬ್ರಿಟಿಷ್ ಸೇನೆಯು ಮಂಗಲ್ ಪಾಂಡೆಯವರನ್ನು ಬಂಧಿಸಿದ್ದರು. ಅಲ್ಲದೇ, 1857ರ ಹೊತ್ತಿಗೆ ಬ್ರಿಟಿಷರು ಈಸ್ಟ್ ಇಂಡಿಯಾ ಕಂಪನಿಯ ಹೆಸರಿನಲ್ಲಿ ಭಾರತವನ್ನು ಸಂಪೂರ್ಣವಾಗಿ ವಶಪಡಿಸಿಕೊಂಡಿದ್ದರು. ಮೇ 10, 1857ರಲ್ಲಿ ಮೀರತ್‌ನ ಕಂಟೋನ್ಮೆಂಟ್ ಭಾಗದಲ್ಲಿ ಭಾರತೀಯ ಸಿಪಾಯಿಗಳಿಗೂ ಮತ್ತು ಬ್ರಿಟಿಷ್ ಸಿಪಾಯಿಗಳಿಗೂ ವ್ಯಾಜ್ಯವಾಗಿ, ಇದೇ ಸಂಗತಿ ‘ಸಿಪಾಯಿ ದಂಗೆ’ ಅಥವಾ ‘ಭಾರತೀಯ ದಂಗೆ’ಗೆ ನಾಂದಿಯಾಯಿತು.

ಈ ಸಂದರ್ಭದಲ್ಲಿ ಆತ್ಮಾರ್ಪಣೆ ಮಾಡಿಕೊಳ್ಳುವುದಕ್ಕೆ ಹೊರಟ ಪಾಂಡೆ ಅವರ ಪ್ರಯತ್ನವೂ ವಿಫಲವಾಗಿತ್ತು. ಗಾಯಗೊಂಡಿದ್ದ ಪಾಂಡೆಯವರನ್ನು ಬ್ರಿಟಿಷ್ ಸರ್ಕಾರದ ಆದೇಶದ ಮೇರೆಗೆ ಏಪ್ರಿಲ್ 8 (1857)ರಂದು ಬ್ಯಾರಕ್ಪುರ(ಕೋಲ್ಕತ್ತ)ದಲ್ಲಿ ಗಲ್ಲಿಗೇರಿಸಲಾಯಿತು.

ಭಾರತ ಸರ್ಕಾರವು ಅವರನ್ನು ಸ್ಮರಿಸುವುದಕ್ಕಾಗಿ ಅಂಚೆ ಚೀಟಿಯನ್ನು ಬಿಡುಗಡೆ ಮಾಡಿತು. ಅವರ ಜೀವನ ಮತ್ತು ಕ್ರಿಯೆಗಳನ್ನು ಹಲವಾರು ಸಿನಿಮಾ ನಿರ್ಮಾಣಗಳಲ್ಲಿ ಚಿತ್ರಿಸಲಾಗಿದೆ.

ಹಾಗೇ ಇತ್ತೀಚಿನ ವರ್ಷಗಳಲ್ಲಿ ಭಾರತೀಯ ಗೋಸಂತತಿಯನ್ನು ಉಳಿಸಲು ಪಣತೊಟ್ಟಿರುವ ಶ್ರೀರಾಮಚಂದ್ರಾಪುರ ಮಠವು “ಮಂಗಲ ಪಾಂಡೆ”ಯ ನೆನಪಿನಲ್ಲಿ 11 ನವೆಂಬರ್ 2016 ರಿಂದ 29 ಜನವರಿ 2017 ರವರೆಗೆ ‘ಮಂಗಲಗೋಯಾತ್ರೆ’ ಎಂಬ ಕಾರ್ಯಕ್ರಮವನ್ನು ರಾಜ್ಯದುದ್ದಗಲಕ್ಕೂ ಸಂಚಾರ ಮಾಡುವುದರ ಮೂಲಕ ಗೋಮಾತೆಯ ರಕ್ಷಣೆಗಾಗಿ ಹೋರಾಟ ನಡೆಸಿದರು.