ಡಾ| ರಾಮಸ್ವಾಮಿ ಬಾಲಸುಬ್ರಹ್ಮಣ್ಯಂ

ಸ್ವಾಮಿ ವಿವೇಕಾನಂದ ಯೂತ್ ಮೂವ್‌ಮೆಂಟ್(SVYM)ನ ಸಂಸ್ಥಾಪಕರು ಹಾಗೂ ಗ್ರಾಸ್‌ರೂಟ್ಸ್ ರಿಸರ್ಚ್ ಅಂಡ್ ಅಡ್ವೊಕಸಿ ಮೂವ್‌ಮೆಂಟ್ (GRAAM) ಸ್ಥಾಪಕರಾದ ಡಾ| ರಾಮಸ್ವಾಮಿ ಬಾಲಸುಬ್ರಹ್ಮಣ್ಯಂ ಅವರು ಅಭಿವೃದ್ಧಿ ಕಾರ್ಯಗಳಲ್ಲಿ ಹೆಸರುವಾಸಿಯಾದವರು. ಇವರು ವಿದ್ವಾಂಸರು, ಲೇಖಕರು, ಸಾರ್ವಜನಿಕ ನೀತಿ ವಕೀಲರು, ನಾಯಕತ್ವ ತರಬೇತುದಾರ ಮತ್ತು ಕಾರ್ಯಕರ್ತರಾಗಿ ತಮ್ಮನ್ನು ತಾವು ಸಮಾಜಕ್ಕೆ ಅರ್ಪಿಸಿಕೊಂಡವರು. ಹಾಗೂ ಮೈಸೂರು ವೈದ್ಯಕೀಯ ಕಾಲೇಜಿನಿಂದ MBBS, ಬಿರ್ಲಾ ಇನ್‌ಸ್ಟಿಟ್ಯೂಟ್ ಆಫ್ ಟೆಕ್ನಾಲಜಿಯಲ್ಲಿ ಆಸ್ಪತ್ರೆ ಮತ್ತು ಆರೋಗ್ಯ ವ್ಯವಸ್ಥೆಗಳ ನಿರ್ವಹಣೆಯಲ್ಲಿ ಎಂಫಿಲ್ ಮತ್ತು ಜಾನ್ ಎಫ್. ಕೆನಡಿ ಸ್ಕೂಲ್ ಆಫ್ ಗವರ್ನಮೆಂಟ್ , ಹಾರ್ವರ್ಡ್ ವಿಶ್ವವಿದ್ಯಾಲಯದಲ್ಲಿ ತಮ್ಮ ಶಿಕ್ಷಣವನ್ನು ಪೂರೈಸಿರುತ್ತಾರೆ.

ಡಾ| ಬಾಲು ಅವರು ತಮ್ಮ 19 ನೇ ವಯಸ್ಸಿನಲ್ಲಿ ಮೈಸೂರು ಜಿಲ್ಲೆಯ ಹೆಗ್ಗಡದೇವನಕೋಟೆ ತಾಲೂಕಿನ ಸರಗೂರು-ಕೆಂಚನಹಳ್ಳಿಯಲ್ಲಿ ಸ್ವಾಮಿ ವಿವೇಕಾನಂದ ಯೂತ್ ಮೂವ್‌ಮೆಂಟ್(SVYM) ಎಂಬ ಅಭಿವೃದ್ಧಿ ಸಂಸ್ಥೆಯನ್ನು, ಸಹೃದಯ ವೈದ್ಯ ಗೆಳೆಯರೊಂದಿಗೆ ಆದಿವಾಸಿ ಮತ್ತು ಬುಡಕಟ್ಟು ಜನಾಂಗದವರಿಗಾಗಿ ಈ ಸಂಸ್ಥೆಯನ್ನು ಸ್ಥಾಪಿಸಿ ಆರೋಗ್ಯ, ಶಿಕ್ಷಣ ಮತ್ತು ಸಾಮಾಜಿಕ ಸ್ಥಾನಮಾನವನ್ನು ಕಾಪಾಡುವಲ್ಲಿ ಅಭ್ಯುದಯ ಕಾರ್ಯಕರ್ತರಾಗಿದ್ದಾರೆ. ಡಾ| ರಾಮಸ್ವಾಮಿ ಬಾಲಸುಬ್ರಹ್ಮಣ್ಯಂ ಅವರು ಸಾಂಸ್ಥಿಕ ಅಭಿವೃದ್ಧಿ ಮತ್ತು ಸಾರ್ವಜನಿಕ ನೀತಿಯಲ್ಲಿ ಶೈಕ್ಷಣಿಕ ಪದವಿಗಳನ್ನು ಪಡೆದರು. ಅವರು 2012 ರಿಂದ 2014ರ ನಡುವೆ ಕಾರ್ನೆಲ್ ವಿಶ್ವವಿದ್ಯಾನಿಲಯದಲ್ಲಿ ಫ್ರಾಂಕ್ ಎಚ್‌ಟಿ ರೋಡ್ಸ್ ಪ್ರಾಧ್ಯಾಪಕರಾಗಿಯೂ, ಕಾರ್ನೆಲ್ ಮತ್ತು ಇತರ ವಿಶ್ವವಿದ್ಯಾಲಯಗಳಲ್ಲಿ ಶೈಕ್ಷಣಿಕ ಸ್ಥಾನಗಳಲ್ಲಿಯೂ ಕಾರ್ಯ ನಿರ್ವಹಿಸಿದ್ದಾರೆ.

ʼಸಾಮಾಜಿಕ ಉದ್ಯಮಶೀಲತೆಯ ತತ್ತ್ವಶಾಸ್ತ್ರದೊಂದಿಗೆ ಬುಡಕಟ್ಟು ಮಹಿಳೆಯರ ಸಬಲೀಕರಣʼ ಎಂಬ ಮಾದರಿ ಕೆಲಸವನ್ನು ಸ್ವಾಮಿ ವಿವೇಕಾನಂದ ಯೂತ್‌ ಮೂವ್‌ಮೆಂಟ್‌ ಆರಂಭಿಸಿದೆ. ಈ ಉಪಕ್ರಮಕ್ಕೆ GRAAM ಸಹಭಾಗಿತ್ವವಿದ್ದು ಈವರೆಗೆ ಅನೇಕ ಕಾರ್ಯಗಳನ್ನು ಬುಡಕಟ್ಟು ಜನಾಂಗದ ಹಿತಾಸಕ್ತಿಯಲ್ಲಿ ನಡೆಸಿದೆ. ಆಹಾರ ತಂತ್ರಜ್ಞಾನ, ರಾಗಿ ಆಧಾರಿತ ಪದಾರ್ಥಗಳ ಉತ್ಪಾದನೆ ಸೇರಿದಂತೆ ಅನೇಕ ವಿಷಯಗಳ ಕುರಿತಾಗಿ ಬುಡಕಟ್ಟು ಮಹಿಳೆಯರಿಗೆ ತರಬೇತಿ ನೀಡಲಾಗುತ್ತಿದೆ. ಈ ಮೂಲಕ ಬುಡಕಟ್ಟು ಜನಾಂಗದ ಮಹಿಳೆಯರನ್ನು ಉದ್ಯಮಿಗಳಾಗಿ ಬೆಳೆಸಲಾಗುತ್ತಿದೆ. ಯಾವುದೇ ಔಪಚಾರಿಕ ಶಿಕ್ಷಣ ಇಲ್ಲದ ಹಾಗೂ ಉತ್ತಮ ಆರ್ಥಿಕ ಸ್ಥಿತಿ ಹೊಂದಿರದ ಬುಡಕಟ್ಟು ಮಹಿಳೆಯರಿಗೆ ಇದರಿಂದ ಅನುಕೂಲವಾಗುವಂತೆ ಸಹಾಯ ಮಾಡಲಾಗುತ್ತಿದೆ. ಇಂತಹ ತರಬೇತಿ ಘಟಕಗಳನ್ನು ಬೆಂಗಳೂರಿನ ಹೊರವಲಯವಾದ ಒರೊಹಳ್ಳಿ ಹಾಗೂ ಎಚ್‌.ಡಿ ಕೋಟೆ ಬಳಿಯ ಹುಣಸೆಕುಪ್ಪೆ ಹಾಡಿಯಲ್ಲಿ ಸ್ಥಾಪಿಸಲಾಗಿದೆ.

ಅವರ ‘ವಾಯ್ಸ್ ಫ್ರಮ್ ದಿ ಗ್ರಾಸ್‌ರೂಟ್ಸ್’ ಮತ್ತು ‘ಐ, ದಿ ಸಿಟಿಜನ್’ ಎಂಬ ಪುಸ್ತಕಗಳು ಅವರ ನಿರೂಪಣೆಗಳ ಮತ್ತು ಅಲೋಚನೆಗಳ ಸಂಕಲನವಾಗಿದ್ದು ಈಗ ಜಾಗತಿಕವಾಗಿ ಮೆಚ್ಚುಗೆ ಪಡೆದಿವೆ. ಸ್ವಾಮಿ ವಿವೇಕಾನಂದರ ಸಂದೇಶದಿಂದ ಪ್ರೇರಿತರಾದ ಇವರು ದೇಶದ ಯುವಜನರಲ್ಲಿ ನಾಯಕತ್ವವನ್ನು ಪ್ರೇರೇಪಿಸುವ ಮೂಲಕ ಭಾರತವನ್ನು ಪುನರುತ್ಥಾನಗೊಳಿಸುವ ತಮ್ಮ ಜೀವನದ ಧ್ಯೇಯವನ್ನು ನೋಡುತ್ತಿದ್ದಾರೆ.

ಪ್ರಸ್ತುತ ಭಾರತ ಸರ್ಕಾರದಲ್ಲಿ ಡಾ| ಬಾಲು ಅವರು ಸಾಮರ್ಥ್ಯ ನಿರ್ಮಾಣ ಆಯೋಗದ ಸದಸ್ಯರಾಗಿ ಕಾರ್ಯನಿರ್ವಹಿಸುತ್ತಿದ್ದಾರೆ.

ತ್ಯಾಗ ಮತ್ತು ಸೇವೆಗಳ ಉತ್ತಮ‌ ಉದಾಹರಣೆಯಾದ ಡಾ| ರಾಮಸ್ವಾಮಿ ಬಾಲಸುಬ್ರಹ್ಮಣ್ಯಂ ಅವರ ಜೀವನವು, ಯುವಕರಿಗೆ ತಮ್ಮ ನಿಜ ಶಕ್ತಿಯನ್ನು ಜಾಗೃತಗೊಳಿಸಿಕೊಳ್ಳಲು ಮತ್ತು ಅದನ್ನು ಭಾರತಾಂಬೆಯ ಸೇವೆಗೆ ಸಮರ್ಪಿಸಲು ದಾರಿದೀಪವಾಗಿದೆ.

-ಅಕ್ಷತಾ ಹೆಬ್ಬಾರ್